ಪಿಪ್ರಾವ್ -
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಒಂದು ಹಳ್ಳಿ, ಬೌದ್ಧ ಅವಶೇಷಗಳುಳ್ಳ ಒಂದು ಪ್ರಮುಖ ಸ್ಥಳ. ಕಪಿಲವಸ್ತುವಿನಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. 

ಈ ಹಳ್ಳಿಯ ಹತ್ತಿರದಲ್ಲಿದ್ದ ದಿಣ್ಣೆಯ ಮೇಲೆ ಉತ್ಖನನ ನಡೆಸಿದಾಗ ಒಂದು ಬೌದ್ಧ ಸ್ತೂಪ ಬೆಳಕಿಗೆ ಬಂತು. ಇದನ್ನು ಇಟ್ಟಿಗೆ, ಮಣ್ಣು ಮತ್ತು ಗಾರೆಯಿಂದ ಕಟ್ಟಲಾಗಿದೆ. ಸ್ತೂಪದ ಎತ್ತರ ಸುಮಾರು 7 ಮೀ, ವ್ಯಾಸ 35 ಮೀ. ಸ್ತೂಪದ ಮಧ್ಯಭಾಗದಲ್ಲಿ ಮೇಲಿನಿಂದ ಸುಮಾರು 3 ಮೀ. ಕೆಳಗೆ, ಸಾಬೂನಗಲ್ಲಿನ ಒಡೆದುಹೋದ ಒಂದು ಚಿಕ್ಕ ಕಲಶ ಇತ್ತು. ಕಲಶದ ತುಂಬ ಮಣ್ಣು ತುಂಬಿತ್ತು. ಅದರಲ್ಲಿ ಮಣಿಗಳು, ಚಿನ್ನದ ಆಭರಣಗಳು, ಕತ್ತರಿಸಿದ ನಕ್ಷತ್ರಗಳು ಮುಂತಾದುವನ್ನು ಹುದುಗಿಸಿಡಲಾಗಿತ್ತು. 
ಅದೇ ಆಳದಲ್ಲೇ ಒಂದು ದುಂಡಗಿನ ಕೊಳವೆಯೂ ಇತ್ತು. ಇದರಲ್ಲಿ ಮಣ್ಣನ್ನು ತುಂಬಲಾಗಿತ್ತು. ಇದರ ಸುತ್ತಲೂ ಇಟ್ಟಿಗೆಯಿಂದ ಕಟ್ಟಲಾಗಿತ್ತು. ಇದರ ವ್ಯಾಸ ಸುಮಾರು 30 ಸೆಂ.ಮೀ. ; ಇದರ ವ್ಯಾಸ 60 ಸೆಂ.ಮೀ. ಕೆಳಗೆ ಕೇವಲ 10 ಸೆಂ.ಮೀ.

ಸುಮಾರು 6 ಮೀ. ಆಳದಲ್ಲಿ ಕೊಳವೆಯ ಪೂರ್ವಕ್ಕೆ ಮರಳುಗಲ್ಲಿನ ದೊಡ್ಡ ಚಪ್ಪಡಿಯೊಂದಿತ್ತು. ಮರಳುಗಲ್ಲಿನ ಸಂದೂಕವೊಂದನ್ನು ಇದು ಮುಚ್ಚಿತ್ತು. ಸಂದೂಕವನ್ನು ಗಟ್ಟಿಯಾದ ಉತ್ತಮ ಜಾತಿಯ ಮರಳುಗಲ್ಲಿನಿಂದ ಮಾಡಿದೆ. ಬಹಳ ಶ್ರಮದಿಂದ ಈ ಗಟ್ಟಿಯಾದ ಕಲ್ಲಿನಲ್ಲಿ ಸಂದೂಕಿನ ಆಕಾರದಲ್ಲಿ ಪೊಳ್ಳು ಮಾಡಲಾಗಿದೆ. ಮುಚ್ಚಳಕ್ಕೆ ಆಳವಾದ ತಿರುಗಣಿ ಇರುವುದರಿಂದ ಇದು ಸಂದೂಕಿನ ಕಂಠದಲ್ಲಿ ಸರಿಯಾಗಿ ಕೂರುತ್ತದೆ.
ಮುಚ್ಚಳವನ್ನು ತೆಗೆದಾಗ ಒಳಗಡೆ ಸಾಬೂನುಗಲ್ಲಿನ 3 ಕಲಶಗಳು ಚಿಕ್ಕ ಪೆಟ್ಟಿಗೆಯೂ ಮರಳಿನ ಬಟ್ಟಲೂ ಕಾಣಿಸಿದುವು. ಬಟ್ಟಲಿನ ಮುಚ್ಚಳದ ಹಿಡಿಕೆ ಮೀನಿನ ಆಕಾರದಲ್ಲಿದೆ. ಇದು ಪೊಳ್ಳಾಗಿದೆ. ಇದನ್ನು ಚಿನ್ನದ ಕಣಗಳಿಂದ ತುಂಬಲಾಗಿದೆ. ಸಾಬೂನುಗಲ್ಲಿನ ಕಲಶಗಳನ್ನು ಚಕ್ರದಲ್ಲಿ ಅಂದವಾಗಿ ತಿರುಗಿಸಲಾಗಿದೆ. ಅವುಗಳ ಮೇಲಿನ ಉಳಿಯ ಗುರುತುಗಳು ಹೊಸದಾಗಿ ತಯಾರಿಸಿದ ವಸ್ತುಗಳ ಮೇಲಿನವುಗಳಂತೆ ಎದ್ದು ಕಾಣುತ್ತವೆ. ಹರಳಿನ ಬಟ್ಟಲನ್ನು ಚೆನ್ನಾಗಿ ಉಜ್ಜಿ ನಯಮಾಡಿರುವುದರಿಂದ ಈಗಿನ ಗಾಜಿನ ಬಟ್ಟಲಿನಂತೆ ಹೊಳೆಯುತ್ತದೆ. 

ಸಂದೂಕಿನ ತಳದ ಮಟ್ಟದಿಂದ ಒಂದು ಇಟ್ಟಿಗೆಯ ಆಳದವರೆಗೆ ಮಣ್ಣಿನ ಕೊಳವೆ ಆಯತಾಕಾರವಾಗಿದೆ ; ಮುಂದೆ ದುಂಡಗಾಗಿ, ಸಂದೂಕಿನ ಕೆಳಗೆ ಇಟ್ಟಿಗೆ ಕೆಲಸದೊಂದಿಗೆ ಸೇರಿ ಹೋಗಿದೆ.
ಶವಾವಶೇಷದ ಕಲಶಗಳಲ್ಲಿ ಎಲುಬಿನ ತುಂಡುಗಳು, ಚಿನ್ನದ ಆಭರಣಗಳು, ವಿವಿಧ ಮುದ್ರೆಗಳಿರುವ ಚಿನ್ನದ ತಗಡುಗಳು, ತುಂಡುಗಳು, ಚಿನ್ನದ ಒಂದು ಗಟ್ಟಿ ತುಂಡು, ಚಿನ್ನ ಮತ್ತು ಬೆಳ್ಳಿಯ ಆರು ಅಥವಾ ಎಂಟು ದಳಗಳ ಅನೇಕ ನಕ್ಷತ್ರಗಳು ಮತ್ತು ಪುಷ್ಪಗಳು, ಮುತ್ತುಗಳು, ಬಿಳಿ ಮತ್ತು ಕೆಂಪು ಕಾರ್ನೀಲಿಯನ್, ಪದ್ಮರಾಗಮಣಿ, ಗೋಮೇದಿಕ, ರಕ್ತಮಣಿ, ಹವಳ, ಹರಳುಗಳು, ಮುಂತಾದುವು ದೊರೆತಿವೆ.

ಚಿಕ್ಕ ಕಲಶದ ಮುಚ್ಚಳದ ಮೇಲೆ ಕ್ರಿ.ಪೂ. ಸುಮಾರು 3 ನೆಯ ಶತಮಾನದ ಒಂದು ಶಾಸನವನ್ನು ಬರೆಯಲಾಗಿದೆ. ಈ ಶಾಸನ ಪ್ರಾಕೃತ ಭಾಷೆಯಲ್ಲಿದೆ. ಇದನ್ನು ಬ್ರಾಹ್ಮೀ ಲಿಪಿಯಲ್ಲಿ ಬರೆಯಲಾಗಿದೆ. ದೇವದತ್ತನಾದ ಬುದ್ಧನ ಶವಾವಶೇಷದ ಈ ಕಲಶವು ಶಾಕ್ಯ ಕಾಲದ ಸುಕಿತಿ ಸಹೋದರರ (ಅವರ ಸಹೋದರಿಯರು, ಮಕ್ಕಳು ಮತ್ತು ಹೆಂಡಂದಿರು ಸೇರಿ ಮಾಡಿದ) ಸೇವೆ ಎಂಬುದು ಇದರ ಅರ್ಥ. 

ಬುದ್ಧನ ಮರಣದ ಅನಂತರ ಶವಾವಶೇಷಗಳನ್ನು ಪಡೆದವರಲ್ಲಿ ಶಾಕ್ಯರೂ ಒಬ್ಬರು ಎಂದು ಪರಿನಿರ್ವಾಣ ಸುತ್ತದಲ್ಲಿ ಹೇಳಲಾಗಿದೆ. ಕಪಿಲ ವಸ್ತುವಿನಲ್ಲಿ ವಾಸಿಸುತ್ತಿದ್ದ ಅವರು ಅದರ ಬಳಿಯ ಪಿಪ್ರಾವ್‍ವಲ್ಲಿ ಈ ಸ್ತೂಪವನ್ನು ಕಟ್ಟಿಸಿರಬೇಕು.
(ಸಿ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ